ಬಳ್ಳಾರಿ
ಭಾರತದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ, ತಾಲ್ಲೂಕು, ಮತ್ತು ಇವುಗಳ ಮುಖ್ಯ ಪಟ್ಟಣ.
ಜಿಲ್ಲೆ: ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿ ಪೂರ್ವದ ಕಡೆಗೆ ಇದೆ. ಇದರ ದಕ್ಷಿಣಕ್ಕೆ ಚಿತ್ರದುರ್ಗ, ದಾವಣಗೆರೆ ಉತ್ತರಕ್ಕೆ ರಾಯಚೂರು, ಪಶ್ಚಿಮಕ್ಕೆ ಹಾವೇರಿ, ಗದಗ ಜಿಲ್ಲೆಗಳೂ ಪೂರ್ವಕ್ಕೆ ಆಂಧ್ರಪ್ರದೇಶವೂ ಇವೆ. ಕೊಪ್ಪಳ ಉ.ಅ.14( 30'-15( 50' ಮತ್ತು ಪೂ.ರೆ. 75( 40-77( 11' ನಡುವೆ ಇದೆ. ಈ ಜಿಲ್ಲೆಯನ್ನು ಬಳ್ಳಾರಿ ಮತ್ತು ಹೊಸಪೇಟೆ ಎಂದು ಎರಡು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ಬಳ್ಳಾರಿ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಹೊಸಪೇಟೆ, ಕೂಡ್ಲಿಗಿ, ಸಿರಗುಪ್ಪ, ಸಂಡೂರು-ಇವು 7 ತಾಲ್ಲೂಕುಗಳು, 27 ಹೋಬಳಿಗಳೂ, 7 ಪಟ್ಟಣಗಳು ಇವೆ. ಜಿಲ್ಲಾ ವಿಸ್ತೀರ್ಣ 8,410 ಚ.ಕಿ.ಮೀ. 10,28,481 ಮಂದಿ ಪುರುಷರು, 99676 ಮಂದಿ ಮಹಿಳೆಯರೂ ಇರುವ ಜಿಲ್ಲಾ ಜನಸಂಖ್ಯೆ 20,25,242 (2001).

ಜಿಲ್ಲೆಯ ಪಶ್ಚಿಮ, ವಾಯವ್ಯ, ಉತ್ತರ ಮತ್ತು ಈಶಾನ್ಯದಲ್ಲಿ ಗಡಿಯಾಗಿ ಹರಿಯುವ ತುಂಗಭದ್ರಾ ನದಿ ಈ ಜಿಲ್ಲೆಯನ್ನು ಪಶ್ಚಿಮದಲ್ಲಿ ಗದಗ, ಕೊಪ್ಪಳ ಜಿಲ್ಲೆಗಳಿಂದಲೂ ಉತ್ತರದಲ್ಲಿ ರಾಯಚೂರು ಜಿಲ್ಲೆಯಿಂದಲೂ ಬೇರ್ಪಡಿಸುತ್ತದೆ. ಜಿಲ್ಲೆಯ ಹೆಚ್ಚು ಭಾಗ ತುಂಗಭದ್ರಾ ನದಿಯ ಕಡೆ ಉತ್ತರಕ್ಕೆ ಇಳಿಜಾರಾಗಿದೆ. ವಾಯವ್ಯದಿಂದ ಆಗ್ನೇಯದವರೆಗೂ ಹಬ್ಬಿರುವ ಸಂಡೂರು ಬೆಟ್ಟಗಳು ಜಿಲ್ಲೆಯನ್ನು ಪೂರ್ವಪಶ್ಚಿಮವಾಗಿ ಎರಡು ಮುಖ್ಯ ಭೌಗೋಳಿಕ ವಿಭಾಗಗಳಾಗಿ ವಿಂಗಡಿಸಿವೆ. ಪೂರ್ವಭಾಗ ಬಳ್ಳಾರಿ ಮತ್ತು ಸಿರಗುಪ್ಪ ತಾಲ್ಲೂಕುಗಳನ್ನೊಳಗೊಂಡಿವೆ. ಈ ಪ್ರದೇಶ ಸಮತಟ್ಟಿನ ಹತ್ತಿಬೆಳೆಯುವ ಕಪ್ಪುಮಣ್ಣಿನ ಬಯಲು. ಅಲ್ಲಲ್ಲಿ ಕಲ್ಲು ಬೆಟ್ಟಗಳು ಉಂಟು. ಪಶ್ಚಿಮದಲ್ಲಿ ಕಪ್ಪು ಮಣ್ಣಿನ ಬಯಲುಗಳೂ ಹೆಚ್ಚುಭಾಗದಲ್ಲಿ ಮಿಶ್ರಿತ ಮತ್ತು ಕೆಂಪು ಮಣ್ಣಿನ ಪ್ರದೇಶಗಳೂ ಇವೆ. ಇಲ್ಲಿ ಹಡಗಲಿ ತಾಲ್ಲೂಕನ್ನು ಬಿಟ್ಟು ಉಳಿದೆಡೆ ಅಲ್ಲಲ್ಲಿ ಕಾಡು ಮತ್ತು ಬೆಟ್ಟಗುಡ್ಡಗಳು ಕಂಡುಬರುತ್ತವೆ. ಪಶ್ಚಿಮಭಾಗ ಪೂರ್ವಭಾಗಕ್ಕಿಂತ ಹೆಚ್ಚು ಎತ್ತರ, ಇಲ್ಲಿ ಮಳೆಯೂ ಅಧಿಕ. ಸಂಡೂರು ಬೆಟ್ಟಸಾಲು ಮಲ್ಲಾಪುರಮ್ ಬಳಿ ತುಂಗಭದ್ರಾ ನದಿಯ ದಂಡೆಯಿಂದ ಹಿಡಿದು ಆಗ್ನೇಯದ ಕಡೆಗೆ ಸುಮಾರು 48ಕಿಮೀ ದೂರ ಹಬ್ಬಿದೆ. ಬೆಟ್ಟಸಾಲಿನ ನಡುವೆ ಒಂದು ಕಡೆ ನಾರಿಹಳ್ಳದ ಎರಡು ಕಮರಿಗಳಿವೆ. ಈ ಶ್ರೇಣಿಯ ದಕ್ಷಿಣ ಭಾಗಕ್ಕಿರುವ ಕುಮಾರಸ್ವಾಮಿ ದೇವಾಲಯವಿರುವ ಬೆಟ್ಟದ ಎತ್ತರ 1036ಮೀ ಮಧ್ಯದಲ್ಲಿರುವ ರಾಮನ ಮಲೈ ಎತ್ತರ 992 ಮೀ. ತೀರ ಉತ್ತರದಲ್ಲಿರುವ ಜಂಬುನಾಥ ಶಿಖರದ ಎತ್ತರ 908 ಮೀ. ಸಂಡೂರು ಬೆಟ್ಟಸಾಲಿನ ಪೂರ್ವಕ್ಕೆ ವಾಯವ್ಯದಿಂದ ಆಗ್ನೇಯಕ್ಕೆ ಹಬ್ಬಿರುವ ಸುಗ್ಗ ಮಹದೇವಿ ಬೆಟ್ಟ ಅಥವಾ ತಾಮ್ರಪರ್ವತ ಶ್ರೇಣಿ ದರೋಜಿ ಕೆರೆಯವರೆಗೂ ಸುಮಾರು 42 ಕಿಮೀ ಗಳಷ್ಟು ಉದ್ದಕ್ಕೆ ವ್ಯಾಪಿಸಿದೆ. ಇದರಲ್ಲಿಯ ಅತ್ಯುನ್ನತ ಶಿಖರದ ಎತ್ತರ ಸುಮಾರು 1002 ಮೀ. ಸಂಡೂರು ಬೆಟ್ಟ ಸಾಲಿಗೆ ನೈಋತ್ಯಕ್ಕೆ ಸುಮಾರು 48ಕಿಮೀ ದೂರದಲ್ಲಿರುವ ಮಲ್ಲಪ್ಪನ ಗುಡ್ಡದ ಶ್ರೇಣಿ ಹಡಗಲಿ ತಾಲ್ಲೂಕಿನಲ್ಲಿ ವ್ಯಾಪಿಸಿದೆ. ಇದು ತುಂಗಭದ್ರಾ ಬಳಿ ಹೊನ್ನೂರಿನ ಹತ್ತಿರ ಪ್ರಾರಂಭವಾಗಿ ಆಗ್ನೇಯದ ಕಡೆಗೆ ಹಬ್ಬಿದೆ. ಸುಮಾರು 40 ಕಿಮೀ ದೂರದಲ್ಲಿ ಚಿಕ್ಕ ಹಗರಿ ಕಣಿವೆಯ ಬಳಿ ಕಡಿದು ಹೋಗಿ ಮುಂದೆ 11 ಕಿಮೀ ದೂರದಲ್ಲಿ ಕಾಣಿಸಿಕೊಂಡು ಚಿತ್ರದುರ್ಗ ಜಿಲ್ಲೆಯಲ್ಲಿ ಮುಂದುವರಿದಿದೆ. ಈ ಶ್ರೇಣಿಯ ಮಲ್ಲಪ್ಪನ ಗುಡ್ಡ ಶಿಖರದ ಎತ್ತರ 978ಮೀ. ಮಲ್ಲಪ್ಪನ ಗುಡ್ಡದ ಶ್ರೇಣಿಯ ನೈಋತ್ಯಕ್ಕೆ ಸುಮಾರು 13-16 ಕಿಮೀ ದೂರದಲ್ಲಿ ವಾಯವ್ಯದಿಂದ ಆಗ್ನೇಯಕ್ಕೆ ಹಬ್ಬಿರುವ ಕಲ್ಲಗಳ್ಳಿ ಗುಡ್ಡದ ಶ್ರೇಣಿ ಬರುತ್ತದೆ. ಇದರ ಅತ್ಯಂತ ದೊಡ್ಡದಾದ ಕಲ್ಲಹಳ್ಳಿಯಲ್ಲಿ ಶಿಖರ 853ಮೀ ಎತ್ತರವಿದೆ. ಈ ಶ್ರೇಣಿ ಸುಮಾರು 14 ಕಿಮೀ ದೂರದಲ್ಲಿ ಕವಲೊಡೆದು ತೆಲಗಿ ಗುಡ್ಡ ಸಮೂಹವಾಗಿ ಮಾರ್ಪಟ್ಟಿದೆ. ಮುಂದೆ ಇದೇ ಹರಪ್ಪನಹಳ್ಳಿಯ ದಕ್ಷಿಣದ ಗುಡ್ಡಗಳವರೆಗೂ ಮುಂದುವರಿದಿದೆ. ಆ ಗುಡ್ಡಗಳಲ್ಲಿ ನರಸಿಂಹದೇವರ ಗುಡ್ಡ 775ಮೀ ಎತ್ತರವಿದೆ. ಈ ಶ್ರೇಣಿ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ಉಚ್ಚಂಗಿದುರ್ಗದ (815 ಮೀ) ವರೆಗೂ ಮುಂದುವರಿದು ಅಲ್ಲಿ ಕೊನೆಗೊಳ್ಳುತ್ತದೆ. ಕೂಡ್ಲಿಗಿಬೆಟ್ಟಶ್ರೇಣಿ ಕೂಡ್ಲಿಗಿಯ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಹಾದುಹೋಗುತ್ತದೆ. ಇದರಲ್ಲಿ ಆನೇಕಲ್ ದುರ್ಗ (724 ಮೀ) ಮತ್ತು ಜರಮಲೆದುರ್ಗ (838 ಮೀ) ಇವೆ. ಸಂಡೂರು ತಾಲ್ಲೂಕಿನ ಚೋರನೂರಿನ ಬಳಿ ಗುಡಿಕೋಟೆ ಶ್ರೇಣಿ ಪ್ರಾರಂಭವಾಗಿ ಕೂಡ್ಲಿಗಿ ತಾಲ್ಲೂಕಿನ ಗುಡಿಕೋಟೆ ದುರ್ಗದ ಉತ್ತರಕ್ಕೆ ಸಾಗಿ ಚಿನ್ನಹಗರಿ ಕಣಿವೆ ದಾಟಿ ಚಿತ್ರದುರ್ಗ ಜಿಲ್ಲೆಯ ಸೆರಗಿನಲ್ಲಿ ಹಾದುಹೋಗುತ್ತದೆ. ಇದರ ದಕ್ಷಿಣಕ್ಕಿರುವ ಕೈಲಾಸಕೊಂಡ ಶಿಖರ 917ಮೀ ಎತ್ತರವಿದೆ. ಈ ಭಾಗ ಇಡೀ ಜಿಲ್ಲೆಯಲ್ಲೇ ಹೆಚ್ಚು ಅರಣ್ಯಭರಿತ. ಜಿಲ್ಲೆಯ ಉತ್ತರ ಭಾಗದಲ್ಲಿ ಆಲೂರು ಗುಡ್ಡಗಳಿವೆ. ಇನ್ನೊಂದು ಶ್ರೇಣಿ ಕೆಂಚನಗುಡ್ಡದಿಂದ ಪ್ರಾರಂಭವಾಗಿ ಹಳೇಕೋಟೆ ಮತ್ತು ಕಂಚಗಾರ ಬೆಳಗಲ್ಲು ಶ್ರೇಣಿಯ ಸುತ್ತಮುತ್ತ ಗುಡ್ಡ ಸಮೂಹಗಳಾಗಿ ಮಾರ್ಪಟ್ಟಿವೆ. ಈ ಜಿಲ್ಲೆಯ ಇತರ ಗುಡ್ಡಗಳಲ್ಲಿ ದರೋಜಿ, ಕಂಪ್ಲಿ ಮತ್ತು ಕುರುಗೋಡು ಬಳಿಯ ಗುಡ್ಡಗಳು ಮುಖ್ಯವಾದವು.

	ಬಳ್ಳಾರಿ ಜಿಲ್ಲೆಯ ನದಿಗಳಲ್ಲಿ ತುಂಗಭದ್ರಾ ಮತ್ತು ಇದರ ಉಪನದಿಗಳಾದ ಹಗರಿ ಮತ್ತು ಚಿಕ್ಕಹಗರಿಗಳು ಮುಖ್ಯವಾದವು. ತುಂಗಭದ್ರಾ (ನೋಡಿ- ತುಂಗಭದ್ರಾ) ನದಿ ಜಿಲ್ಲೆಯ ಪಶ್ಚಿಮ ಮತ್ತು ಉತ್ತರದ ಅಂಚಿನಲ್ಲಿ ಗಡಿ ರೇಖೆಯಾಗಿ ಹರಿಯುತ್ತದೆ. ಇದು ಜಿಲ್ಲೆಯನ್ನು ಹರಪನಹಳ್ಳಿಯ ಕಡತಿ ಗ್ರಾಮದ ಬಳಿ ಪ್ರವೇಶಿಸಿ ಹರಪನಹಳ್ಳಿ, ಹಡಗಲಿ, ಹೊಸಪೇಟೆ ಮತ್ತು ಸಿರಗುಪ್ಪ ತಾಲ್ಲೂಕುಗಳ ಉತ್ತರದ ಎಲ್ಲೆಯಾಗಿ ಸುಮಾರು 322 ಕಿಮೀ ದೂರ ಹರಿಯುತ್ತದೆ. ಇದರ ನೀರು ಸಿಹಿಯಾಗಿದ್ದು ರುಚಿಗೆ ಹೆಸರಾದ ಗಂಗಾಸ್ನಾನ ತುಂಗಾಪಾನ ಎಂಬ ನಾಣ್ಣುಡಿಗೆ ಪಾತ್ರವಾಗಿದೆ. ಈ ನದಿಗೆ ಮಲ್ಲಾಪುರಮ್ ಬಳಿ ತುಂಗಭದ್ರಾ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಈ ನದಿಯ ಮಧ್ಯದಲ್ಲಿರುವ ಅನೇಕ ದ್ವೀಪಗಳಲ್ಲಿ ದೇಶನೂರು ದ್ವೀಪ ಸುಮಾರು 9.5ಕಿಮೀ ಉದ್ದವಿದೆ. ತುಂಗಭದ್ರಾ ನದಿಯ ಉಪನದಿ ಹಗರಿ ಹೊಳೆ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಯಲ್ಲಿ ಹುಟ್ಟಿ ಚಿತ್ರದುರ್ಗ ಜಿಲ್ಲೆಯಲ್ಲಿ ಹರಿದು ಆಂಧ್ರಪ್ರದೇಶದಲ್ಲಿ ಸ್ವಲ್ಪದೂರ ಸಾಗಿ ಮತ್ತೆ ಬಳ್ಳಾರಿ ಜಿಲ್ಲೆ ಪ್ರವೇಶಿಸಿ ಬಳ್ಳಾರಿ, ಸಿರಗುಪ್ಪ ತಾಲ್ಲೂಕುಗಳಲ್ಲಿ ಹರಿದು ತುಂಗಭದ್ರಾ ನದಿಗೆ ಸೇರುತ್ತದೆ. ಚಿಕ್ಕಹಗರಿ ನದಿ ಚಿತ್ರದುರ್ಗ ಜಿಲ್ಲೆಯಲ್ಲಿ ಹುಟ್ಟಿ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ, ಕೂಡ್ಲಿಗಿ ಮತ್ತು ಹಡಗಲಿ ತಾಲ್ಲೂಕುಗಳಲ್ಲಿ ಹರಿದು ತುಂಗಭದ್ರಾ ನದಿಯನ್ನು ಸೇರುತ್ತದೆ. ಇದರ ಸಂಗಮ ಸ್ಥಳವನ್ನು ಈಗ ತುಂಗಭದ್ರಾ ಅಣೆಕಟ್ಟು ಆವರಿಸಿದೆ. ಹಗರಿ ನದಿಯ ಉಪಹೊಳೆಯಾದ ಚಿನ್ನಹಗರಿ ಚಿತ್ರದುರ್ಗ ಜಿಲ್ಲೆಯಲ್ಲಿ ಹುಟ್ಟಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಹರಿದು ಹಗರಿ ನದಿಯನ್ನು ಆಂಧ್ರಪ್ರದೇಶದ ರಾಯದುರ್ಗ ತಾಲ್ಲೂಕಿನಲ್ಲಿ ಉತ್ತರ ಭಾಗದಲ್ಲಿ ಸೇರುತ್ತದೆ. ಇವಲ್ಲದೆ ನೀರಾವರಿಗೆ ಉಪಯುಕ್ತವಾಗಿರುವ ಹಗ್ಗನೂರು ತೊರೆ, ಹಂಪಸಾಗರ, ಬೆಲ್ಲಹುಣಿಸಿ ಹೊಳೆ, ಗೌರಿಪುರ ಹೊಳೆ, ನಾರಿಹಳ್ಳ ಮೊದಲಾದ ಸಣ್ಣಪುಟ್ಟ ತೊರೆಗಳು ಈ ಜಿಲ್ಲೆಯಲ್ಲಿ ಹುಟ್ಟಿ ತುಂಗಭದ್ರಾ ಮತ್ತು ಅದರ ಉಪಹೊಳೆಗಳನ್ನು ಸೇರುತ್ತವೆ. ಇವುಗಳ ಜೊತೆಗೆ ಈ ಜಿಲ್ಲೆಯಲ್ಲಿ ಸುಮಾರು 22 ದೊಡ್ಡ ಕೆರೆಗಳೂ 170 ಸಣ್ಣ ಕೆರೆಗಳೂ ಇವೆ.

ಈ ಜಿಲ್ಲೆಯಲ್ಲಿ ಹೆಚ್ಚು ಮಳೆ ಬೀಳದಿರುವ ಪ್ರಯುಕ್ತ ದಟ್ಟ ಅರಣ್ಯಗಳಿಲ್ಲ. ಸಂಡೂರು ತಾಲ್ಲೂಕಿನ ಬೆಟ್ಟಪ್ರದೇಶಗಳನ್ನು ಬಿಟ್ಟರೆ ಉಳಿದೆಡೆ ಗಿಡಮರಗಳು ವಿರಳವೆಂದೇ ಹೇಳಬಹುದು. ಜಿಲ್ಲೆಯ ಅರಣ್ಯಪ್ರದೇಶದ ಒಟ್ಟು ವಿಸ್ತೀರ್ಣ 1,618.75 ಚ.ಕಿಮೀಗಳು. ಇದು ಜಿಲ್ಲೆಯ ಒಟ್ಟು ವಿಸ್ತೀರ್ಣದ ಶೇಕಡಾ ಸುಮಾರು 16ರಷ್ಟಾಗುತ್ತದೆ. ಇದರಲ್ಲಿ ಸ್ವಲ್ಪಭಾಗ ಎಲೆ ಉದುರುವ ಕಾಡಿನಿಂದಲೂ ಉಳಿದ ಹೆಚ್ಚುಭಾಗ ಕುರಚಲು ಕಾಡಿನಿಂದಲೂ ಕೂಡಿದೆ. ಎಲೆ ಉದುರುವ ಕಾಡುಗಳು ಹೆಚ್ಚಾಗಿ ಸಂಡೂರು ಮತ್ತು ಕೂಡ್ಲಿಗಿ ತಾಲ್ಲೂಕುಗಳಲ್ಲಿವೆ. ಈ ಕಾಡುಗಳಲ್ಲಿ ಕಮ್ಮರ, ದಿಂಡಿಗ, ಹರಗಲು ಮತ್ತಿತರ ಸಣ್ಣಜಾತಿಯ ಮರಗಳಿವೆ. ಸಂಡೂರು ಶ್ರೇಣಿಯಲ್ಲಿ ಮಾತ್ರ ಶ್ರೀಗಂಧ ಮತ್ತು ಬೀಟೆ ಇವೆ. ಕೂಡ್ಲಿಗಿ ತಾಲ್ಲೂಕುಗಳಲ್ಲಿ ಈಚಲು ಗಣನೀಯವಾಗಿ ಕಂಡುಬರುತ್ತದೆ. ಜಿಲ್ಲೆಯ ಪೂರ್ವದ ಕಡೆ ಹೋದಂತೆಲ್ಲ ಕುರುಚಲು ಕಾಡು ಕಂಡುಬರುತ್ತದೆ. ಕಾಡುಗಳಲ್ಲಿ ಹುಣಿಸೆಬೇವು ಮಾವು ತೂಪರ, ಸೀತಾಫಲ ಮುಂತಾದವು ಬೆಳೆಯುತ್ತವೆ. ಜೇನು ಮತ್ತು ದಿಂಡಿಗದ ಅಂಟು ದೊರೆಯುವುದುಂಟು. ಕಡವೆ, ಜಿಂಕೆ, ಕಾಡುಹಂದಿ, ಚಿರತೆ ಮೊದಲಾದವು ಕಂಡುಬರುತ್ತವೆ. ಹಿಂದೆ ಸಂಡೂರು ತಾಲ್ಲೂಕಿನಲ್ಲಿ ಹುಲಿಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದುವು. ಇಲ್ಲಿಯ ಕಾಡುಗಳಲ್ಲಿ ಕಾಡುಕುರಿಗಳೂ ಇವೆ. ಕೂಡ್ಲಿಗಿ ತಾಲ್ಲೂಕಿನಲ್ಲಿ ಕರಡಿಗಳಿವೆ. ಜಿಂಕೆ, ಕಿರುಬ ಮತ್ತು ತೋಳಗಳು ಈ ಜಿಲ್ಲೆಯ ಪಶ್ಚಿಮ ಭಾಗದಲ್ಲಿವೆ. ತುಂಗಭದ್ರಾ ನದಿಯಲ್ಲಿ ಮೊಸಳೆಗಳುಂಟು. ನವಿಲು, ಪಾರಿವಾಳ, ಕೊಕ್ಕರೆ, ಗಿಳಿ, ಗಿಡುಗ, ಹದ್ದು ಮೊದಲಾದ ಪಕ್ಷಿಗಳೂ ನಾಗರಹಾವು, ಹೆಬ್ಬಾವು ಕಟುಗದಹಾವು ಮೊದಲಾದ ಉರಗಗಳೂ ಇವೆ.

ಈ ಜಿಲ್ಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ಸೀಸದ ಅದುರುಗಳಿವೆ. ಜಿಪ್ಸಮ್, ಮ್ಯಾಗ್ನಸೈಟ್, ಕ್ಯಾಲ್ಸೈಟ್, ಗಾರ್ನೆಟ್ ಬೆಣಚುಕಲ್ಲು, ಕಲ್ನಾರು, ಕುರುಂಗದ ಕಲ್ಲು, ಕಾವಿಮಣ್ಣು, ಸೋಪಿನಕಲ್ಲು, ಜೇಡಿಮಣ್ಣು ಮೊದಲಾದ ಭೂಗರ್ಭ ಸಂಪನ್ಮೂಲಗಳಿವೆ. ಸಂಡೂರು ಶ್ರೇಣಿಯಲ್ಲಿ ಬಳ್ಳಾರಿ ಮತ್ತು ಹರಪನಹಳ್ಳಿ ತಾಲ್ಲೂಕುಗಳಲ್ಲಿ ಕಬ್ಬಿಣದ ಅದುರು ಹೆಚ್ಚಾಗಿ ಕಂಡುಬರುತ್ತದೆ. ಜಿಲ್ಲೆಯಲ್ಲಿ ಒಟ್ಟು 1,000 ದಿಂದ 1,250 ಮಿಲಿಯನ್ ಟನ್ ಕಬ್ಬಿಣದ ಅದುರು ಇದೆ ಎಂದು ಅಂದಾಜು. ಸಂಡೂರು, ಹೊಸಪೇಟೆ ಮತ್ತು ಹರಪನಹಳ್ಳಿ ತಾಲ್ಲೂಕುಗಳಲ್ಲಿ ಮ್ಯಾಂಗನೀಸ್ ಅದುರು ಹೆಚ್ಚಾಗಿದೆ. ಹೊಸಪೇಟೆ ತಾಲ್ಲೂಕಿನಲ್ಲಿ ಸೀಸದ ಅದುರು ಇದೆ. ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಮತ್ತು ಕೊನಗನ ಹೊಸೂರು ಹಾಗೂ ಕಲ್ಲಹಳ್ಳಿ ಬಳಿ ಚಿನ್ನದ ಅದುರು ಕಂಡುಬರುತ್ತದೆ. ತಾಮ್ರದ ಅದುರು ಬಳ್ಳಾರಿ ತಾಲ್ಲೂಕಿನಲ್ಲಿದೆ.

ಈ ಜಿಲ್ಲೆಯಲ್ಲಿ ವರ್ಷದ ಹೆಚ್ಚು ಕಾಲ ಒಣಹವೆ ಇರುತ್ತದೆ. ಮಾರ್ಚಿಯಿಂದ ಮೇ ತನಕ ಬೇಸಿಗೆಯ ತಾಪ ಹೆಚ್ಚು. ಜೂನ್‍ನಿಂದ ನವೆಂಬರ್ ತನಕ ಮಳೆಯ ಕಾಲ, ಡಿಸೆಂಬರ್‍ನಿಂದ ಫೆಬ್ರವರಿಯ ತನಕ ಒಣಹವೆ ಇದ್ದು ತಂಪಾಗಿರುತ್ತದೆ. ಉಷ್ಣತೆ ಕಡಿಮೆ ಇರುವ ಡಿಸೆಂಬರ್ ತಿಂಗಳಲ್ಲಿ ಮಾಧ್ಯ ದೈನಿಕ ಗರಿಷ್ಠ ಉಷ್ಣತೆ 29.7(ಛಿ ಇದ್ದರೆ ಮಾಧ್ಯ ದೈನಿಕ ಕನಿಷ್ಠ ಉಷ್ಣತೆ 16.7(ಛಿ ಇರುತ್ತದೆ. ಅತ್ಯಂತ ತಾಪಭರಿತ ಏಪ್ರಿಲ್ ತಿಂಗಳಲ್ಲಿನ ದೈನಿಕ ಕನಿಷ್ಠ ಉಷ್ಣತೆ 39.2(ಛಿ ಮತ್ತು ದೈನಿಕ ಕನಿಷ್ಠ ಉಷ್ಣತೆ 25.2(ಛಿ ಇರುತ್ತದೆ. ಈ ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 518 ಮಿಮೀ. ಮಳೆ ಸಮಪ್ರಮಾಣದಲ್ಲಿ ಬೀಳದು. ಉದಾಹರಣೆಗೆ 1971ರಲ್ಲಿ ಸಿರಗುಪ್ಪ ತಾಲ್ಲೂಕಿನಲ್ಲಿ 743.4 ಮಿಮೀ ಮತ್ತು ಮಲ್ಲಾಪುರಮಿನಲ್ಲಿ 396.4 ಮಿಮೀ. ಮಳೆ ಬಿದ್ದಿತ್ತು. ಕಳೆದ ಮೂವತ್ತೇಳು ವರ್ಷಗಳಲ್ಲಿ ಮಳೆ 400 ಮಿಮೀ ಗಳಿಂದ 700 ಮಿಮೀಗಳ ವ್ಯತ್ಯಾಸದಲ್ಲಿ ಬಿದ್ದಿದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಏಳುವ ಬಂಗಾಳ ಕೊಲ್ಲಿಯ ಚಂಡಮಾರುತಗಳಿಂದ ಕೆಲವೊಮ್ಮೆ ಬಿರುಸಾದ ಮಳೆಗಾಳಿಗಳುಂಟಾಗುತ್ತವೆ.

	ಈ ಜಿಲ್ಲೆಯ ಒಟ್ಟು ವಿಸ್ತೀರ್ಣದ ಅರ್ಧದಷ್ಟು ಭಾಗವನ್ನು ವ್ಯವಸಾಯಕ್ಕೆ ರೂಢಿಸಿಕೊಳ್ಳಲಾಗಿದೆ. ಇದರಲ್ಲಿ ಆಹಾರ ಬೆಳೆ ಬೆಳೆಯುವ ಪ್ರದೇಶ 3,08,478 ಹೆಕ್ಟೇರುಗಳು, ಆಹಾರೇತರ ಬೆಳಗಳ ಪ್ರದೇಶ 2,40,628 ಹೆಕ್ಟೇರುಗಳು (70-71). ಇದರಲ್ಲಿ ಬತ್ತ 21,876, ಜೋಳ 1,70,149 ರಾಗಿ 17,532, ಸಜ್ಜೆ 15,003 ದ್ವಿದಳಧಾನ್ಯಗಳು 40,262, ಕಬ್ಬು 10,442 ತೆಂಗು 465, ಕಡಲೆಕಾಯಿ 58,800 ಮತ್ತು ಹತ್ತಿ 96,902 ಹೆಕ್ಟೇರುಗಳಲ್ಲಿ ಬೆಳೆಯುತ್ತಾರೆ. (1972-73). ಬಾಳೆಹಣ್ಣು, ಮಾವು, ನಿಂಬೆ ಮೊದಲಾದವು ಸೇರಿದಂತೆ ಒಟ್ಟು 5,805 ಎಕರೆಗಳಲ್ಲಿ ಹಣ್ಣು ಬೆಳೆಗಳೂ ಮೆಣಸಿನಕಾಯಿ, ಈರುಳ್ಳಿ, ಟೊಮ್ಯಾಟೋ, ಬದನೆಕಾಯಿ ಸೇರಿದಂತೆ ಸು. 2,012 ಹೆಕ್ಟೇರ್‍ಗಳಲ್ಲಿ ತರಕಾರಿ ಬೆಳೆಗಳೂ ಉಂಟು (1970-71). ತೋಟಗಾರಿಕೆ ಇಲಾಖೆ ತೆಂಗು ಮತ್ತು ಗೇರುಬೀಜ ಬೆಳೆಯುವ ಪ್ರದೇಶವನ್ನು ವಿಸ್ತರಿಸುವ ಯೋಜನೆಯನ್ನಿಟ್ಟುಕೊಂಡಿದೆ.

	ಬಳ್ಳಾರಿ ಜಿಲ್ಲೆ ಇಂದು ಅಧಿಕ ಪ್ರಮಾಣದಲ್ಲಿ ನೀರಾವರಿ ಸೌಕರ್ಯ ಪಡೆದಿರುವ ಜಿಲ್ಲೆಗಳ ಪೈಕಿ ಒಂದು. ತುಂಗಭದ್ರಾ ಜಲಾಶಯ ಯೋಜನೆ ಕಾರ್ಯಗತವಾದಾಗ (1953) ಈ ಜಿಲ್ಲೆಯಲ್ಲಿ ಹಸಿರುಕ್ರಾಂತಿ ಪ್ರಾರಂಭವಾಯಿತು. 1970-71ರ ಹೊತ್ತಿಗೆ ಸು. 73,385 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿತ್ತು. ಅದರಲ್ಲಿ ತುಂಗಭದ್ರಾ ಜಲಾಶಯ ಮತ್ತು ಭದ್ರಾ ಯೋಜನೆಗಳಿಂದ ಕ್ರಮವಾಗಿ 37,150 ಹೆಕ್ಟೇರುಗಳು ಮತ್ತು 4,047 ಹೆಕ್ಟೇರುಗಳು; ಹಾಗೆಯೇ ವಿಜಯನಗರ ಕಾಲದಲ್ಲಿ ನಿರ್ಮಿಸಿದ ನಾಲೆಗಳಿಂದ ಸು. 7,120, ಹಗರಿಬೊಮ್ಮನಹಳ್ಳಿ ಯೋಜನೆಯಿಂದ 2,975, ಹಳೆಯ ಕೆರೆಗಳಿಂದ 7,298, ಹೊಸ ಕೆರೆಗಳಿಂದ 2,069 ಮತ್ತು ಮತ್ತಿತರ ಸಾಧನಗಳಿಂದ 973 ಹೆಕ್ಟೇರುಗಳು.

	ಹಗರಿ ಮತ್ತು ಸಿರಗುಪ್ಪ ಬಳಿ 1906 ಮತ್ತು 1937ರಷ್ಟು ಹಿಂದೆಯೇ ಮದರಾಸು ಸರ್ಕಾರ ಪ್ರಾರಂಭಿಸಿದ ವ್ಯವಸಾಯ ಸಂಶೋಧನಾ ಕೇಂದ್ರಗಳಿವೆ. ಬಳ್ಳಾರಿಯಲ್ಲಿ 1954ರಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿದ ದಾಕ್ಷಿಣಾತ್ಯ ಪ್ರಾದೇಶಿಕ ಮಣ್ಣು ಸಂರಕ್ಷಣಾ ಸಂಶೋಧನಾ ಉಪಕೇಂದ್ರವಿದೆ. ಹೊಸಪೇಟೆ ತಾಲ್ಲೂಕಿನ ಕಂಪ್ಲಿಯಲ್ಲಿ ವ್ಯವಸಾಯ ತರಬೇತಿ ಶಾಲೆ ಇದೆ. ಜಿಲ್ಲೆಯ ಈ ವಿವಿಧ ಸಂಸ್ಥೆಗಳ ಜತೆಗೆ ವ್ಯವಸಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳು ಸೇರಿಕೊಂಡು ಈ ಜಿಲ್ಲೆಯ ವ್ಯವಸಾಯರಂಗದಲ್ಲಿ ವೈಜ್ಞಾನಿಕ ಸಾಗುವಳಿ ಹಾಗೂ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಲು ಸಹಾಯಕವಾಗಿವೆ. 1970-71ರಿಂದ ಒಣಭೂಮಿ ವ್ಯವಸಾಯಾಭಿವೃದ್ಧಿ ಯೋಜನೆಯನ್ನೂ ಪ್ರಾರಂಭಿಸಲಾಗಿದೆ.

ಮೀನುಗಾರಿಕೆಗೂ ಈ ಜಿಲ್ಲೆಯಲ್ಲಿ ತುಂಬ ಅವಕಾಶಗಳಿವೆ. ತುಂಗಭದ್ರಾ ಜಲಾಶಯದಲ್ಲೇ ವರ್ಷಕ್ಕೆ ಸುಮಾರು 600 ಮೆಟ್ರಿಕ್ ಟನ್ನುಗಳಷ್ಟು ಮೀನು ಹಿಡಿಯಲಾಗುತ್ತಿದ್ದು ಒಟ್ಟು ಮೀನಿನ ವಾರ್ಷಿಕ ಉತ್ಪಾದನೆ 2,550 (1971) ಮೆಟ್ರಿಕ್ ಟನ್ನುಗಳಿತ್ತು. ಜಿಲ್ಲೆಯಲ್ಲಿ ಪಶುವೈದ್ಯಾಲಯಗಳೂ ಕೃತಕ ಗರ್ಭಧಾರಣ ಕೇಂದ್ರಗಳೂ ಇವೆ. ಕುರಿಕುಪ್ಪಿಯಲ್ಲಿ 1948-49ರಲ್ಲಿ ಆಗಿನ ಮದರಾಸು ಸರ್ಕಾರ ಸ್ಥಾಪಿಸಿದ ಕುರಿ ಮತ್ತು ದನದ ಸಂಯುಕ್ತ ಫಾರಮ್ ಇದೆ. ಕುರಿಕುಪ್ಪಿ ಫಾರಮಿಗೆ ಸೇರಿದಂತೆ ಕೋಳಿ ಸಾಕಣಾ ಕೇಂದ್ರ ಪ್ರಾರಂಭವಾಗಿದೆ.

	ಬಳ್ಳಾರಿ ಜಿಲ್ಲೆ ವ್ಯವಸಾಯ ಪ್ರಧಾನವಾದದ್ದಾದರೂ ಕೈಗಾರಿಕಾ ಕ್ಷೇತ್ರದಲ್ಲೂ ಗಣನೀಯ ಸ್ಥಾನಗಳಿಸಿದೆ. ಬಳ್ಳಾರಿ, ಹೊಸಪೇಟೆ ಮತ್ತು ಸಂಡೂರು ತಾಲ್ಲೂಕುಗಳಲ್ಲಿ ಸುಮಾರು 21 ಗಣಿಗಳಿವೆ. ಇಲ್ಲಿ ಕಬ್ಬಿಣ, ಮ್ಯಾಂಗನೀಸ್ ಅದುರುಗಳು ಹಾಗೂ ರೆಡ್ ಆಕ್ಸೈಡುಗಳನ್ನು ತೆಗೆಯಲಾಗುತ್ತದೆ. ಸಂಡೂರು ತಾಲ್ಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಮ್ಯಾಂಗನೀಸ್ ಅದುರನ್ನು ತೆಗೆಯಲಾಗುತ್ತಿದೆ. ಕಾರವಾರ, ಮರ್ಮಗೋವಾ ಮತ್ತು ಮದರಾಸು ಬಂದರುಗಳ ಮೂಲಕ ಇಲ್ಲಿಯ ಅದುರು ರಫ್ತಾಗುತ್ತದೆ. ಹೊಸಪೇಟೆ ಮತ್ತು ಕಂಪ್ಲಿಗಳಲ್ಲಿ ಸಕ್ಕರೆ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳ ಉಪಉತ್ಪನ್ನಗಳಿಂದ ಸ್ಪಿರಿಟ್ ಮತ್ತು ಮಾದಕ ಪಾನೀಯಗಳನ್ನು ತಯಾರಿಸುವ ಒಂದು ಕಾರ್ಖಾನೆ ಹೊಸಪೇಟೆಯಲ್ಲಿದೆ. ಕಂಪ್ಲಿ ಸಕ್ಕರೆ ಕಾರ್ಖಾನೆ ಸಹಕಾರಿ ವ್ಯವಸ್ಥೆಯಿಂದ ಸ್ಥಾಪನೆಯಾದ ಸಕ್ಕರೆ ಕಾರ್ಖಾನೆಗಳಲ್ಲಿ ಇಡೀ ರಾಜ್ಯದಲ್ಲೇ ಪ್ರಪ್ರಥಮ. ತುಂಗಭದ್ರಾ ಉಕ್ಕಿನ ಉತ್ಪನ್ನಗಳ ಕಾರ್ಯಾಗಾರ ಹೊಸಪೇಟೆಯಲ್ಲಿದೆ. ಇದು ಕರ್ನಾಟಕ, ಆಂಧ್ರ ಮತ್ತು ಕೇಂದ್ರ ಸರ್ಕಾರಗಳ ಪಾಲುದಾರಿಕೆಯಲ್ಲಿ ನಡೆಯುತ್ತಿದೆ. 1969-70ರಲ್ಲಿ ಇದರ ವಾರ್ಷಿಕ ಉತ್ಪನ್ನ 3,892 ಮೆಟ್ರಿಕ್ ಟನ್ನುಗಳು. ಹೊಸಪೇಟೆ ತಾಲ್ಲೂಕಿನ ತೋರಣಗಲ್ಲಿನಲ್ಲಿ ಕೇಂದ್ರ ಸರ್ಕಾರದಿಂದ ಯೋಜಿತವಾಗಿರುವ ವಿಜಯನಗರ ಉಕ್ಕಿನ ಕಾರ್ಖಾನೆ ಜಿಲ್ಲೆಯ ಭಾರಿ ಉದ್ಯಮ. ಇದರ ಅಂದಾಜು ಬಂಡವಾಳ ಸುಮಾರು 300 ಕೋಟಿ ರೂಪಾಯಿಗಳು: ಎಂ.ಜಿ.ಆಟೊಮೊಬೈಲ್ಸ್ ಎಂಜಿನಿಯರಿಂಗ್ ಕಂಪನಿ (1924) ಜಿಲ್ಲೆಯ ಬೃಹತ್ ಉದ್ಯಮಗಳಲ್ಲೊಂದು. ಇದು ತಿಂಗಳಿಗೆ 30 ಬಸ್‍ಗಳಿಗೆ ಹೊಸ ಮೈಕಟ್ಟುಗಳನ್ನು ನಿರ್ಮಿಸುವ ಸಾಮಥ್ರ್ಯ ಪಡೆದಿದೆ.

	ಈ ಜಿಲ್ಲೆಯಲ್ಲಿ ನೋಂದಾಯಿಸಿದ ಸಣ್ಣ ಪ್ರಮಾಣದ ಕೈಗಾರಿಕೆಗಳು, ಕೈಗಾರಿಕಾ ಎಸ್ಟೇಟ್ ಮತ್ತು ಷೆಡ್ಡುಗಳು ಇವೆ. ಹತ್ತಿ ಕೈಗಾರಿಕೆಗೆ ಸಂಬಂಧಿಸಿದ ಘಟಕಗಳೂ ಎಣ್ಣೆ ಗಿರಣಿಗಳೂ ಇವೆ. ಸಾಮಾನ್ಯ ಎಂಜಿನಿಯರಿಂಗ್ ಉದ್ಯಮಗಳಿವೆ. ಆಹಾರ, ಪಾನೀಯ, ಹೊಗೆಸೊಪ್ಪು ಮೊದಲಾದವುಗಳಿಗೆ ಸಂಬಂಧಿಸಿದ ಕೈಗಾರಿಕೆಗಳಿವೆ. ಮುದ್ರಣಾಲಯಗಳು, ಚರ್ಮ ಮತ್ತು ರಬ್ಬರ್ ಉತ್ಪನ್ನ ಹಾಗೂ ಬೀಡಿಕಟ್ಟುವ ಉದ್ಯಮಗಳಿವೆ. ಬಳ್ಳಾರಿಯಲ್ಲಿ ಮತ್ತು ಹೊಸಪೇಟೆಯಲ್ಲಿ ರಾಸಾಯನಿಕ ಕಾರ್ಖಾನೆಗಳಿವೆ. ಹತ್ತಿ ರೇಷ್ಮೆ ಮತ್ತು ಉಣ್ಣೆ ನೇಯುವ ಮಗ್ಗಗಳು ಈ ಜಿಲ್ಲೆಯಲ್ಲಿವೆ. ಗಾಣದ ಎಣ್ಣೆ ಉತ್ಪಾದನಾ ಸಹಕಾರ ಸಂಘಗಳಿವೆ. ಇವುಗಳಲ್ಲದೆ ಮರಕೊಯ್ಯುವ, ಎತ್ತಿನಗಾಡಿ ಕೂಡಿಸುವ, ಪೀಠೋಪಕರಣಗಳನ್ನು ಮಾಡುವ ಸುಮಾರು 21ಕ್ಕೂ ಮಿಕ್ಕಿದ ಘಟಕಗಳಿವೆ. ಮಡಕೆ, ಚಾಪೆ, ಕುಕ್ಕೆ ಮೊದಲಾದವನ್ನು ಮಾಡುವ ಪುರಾತನ ಮತ್ತು ಅಲ್ಪಾದಾಯದ ಕೈಗೆಲಸದ ಉದ್ಯಮಗಳು ಹಲವಾರಿವೆ.

	ಈ ಜಿಲ್ಲೆಯಿಂದ ಹತ್ತಿ, ನೆಲಗಡಲೆ, ಸಕ್ಕರೆ, ಜೋಳ, ಬತ್ತ, ಈರುಳ್ಳಿ, ಕಬ್ಬಿಣದ ಅದುರು, ಮ್ಯಾಂಗನೀಸ್ ಅದುರು, ಜಮಖಾನಗಳು, ಉಣ್ಣೆಕಂಬಳಿ ಮೊದಲಾದವು ರಫ್ತಾಗುತ್ತವೆ. ಹತ್ತಿಬಟ್ಟೆಗಳು, ಸಿಮೆಂಟ್, ಗೋದಿ, ಮಸಾಲೆ ಸಾಮಾನುಗಳು, ಮರಮುಟ್ಟ ಆಭರಣಗಳು, ಟೀ, ಕಾಫಿಬೀಜ, ಯಂತ್ರೋಪಕರಣಗಳು, ಔಷಧಿಗಳು, ಕಾಗದ ಮತ್ತಿತರ ವಸ್ತುಗಳು ಆಮದಾಗುತ್ತವೆ. ಆಂತರಿಕ ವ್ಯಾಪಾರಕ್ಕೆ ಬಳ್ಳಾರಿ ಹೊಸಪೇಟೆ ಮತ್ತು ಕೊಟ್ಟೂರುಗಳು ಮುಖ್ಯ ಕೇಂದ್ರಗಳಾಗಿವೆ. ತಾಲ್ಲೂಕು ಕೇಂದ್ರಗಳಲ್ಲೂ ಸಗಟು ವ್ಯಾಪಾರ ನಡೆಯುತ್ತದೆ. ಹತ್ತಿ, ಕಡಲೆಕಾಯಿ, ಕಡಲೆಕಾಯಿ ಎಣ್ಣೆ, ಜೋಳ, ದ್ವಿದಳದಾನ್ಯ, ಕಂಬಳಿ ಮುಂತಾದವು ಸಗಟು ವ್ಯಾಪಾರದ ಪ್ರಮುಖ ವಸ್ತುಗಳು. ಈ ಜಿಲ್ಲೆಯಲ್ಲಿ ಸುಮಾರು 40 ಸ್ಥಳಗಳಲ್ಲಿ ವಾರಕ್ಕೊಮ್ಮೆ ಸಂತೆಗಳು ನಡೆಯುತ್ತವೆ. ಈ ಸಂದರ್ಭಗಳಲ್ಲಿ ನಡೆಯುವ ಜಾನುವಾರು ವ್ಯಾಪಾರ ಪ್ರಮುಖವಾದದ್ದು. ಜಿಲ್ಲೆಯ ಅನೇಕ ಸ್ಥಳಗಳಲ್ಲಿ ನಿಯಂತ್ರಿತ ಮಾರುಕಟ್ಟೆಗಳಿವೆ.

	ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಅದರ ಶಾಖೆಗಳು, ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್, ಕೃಷಿ ಸಾಲ ನೀಡಿಕೆ ಸಹಕಾರ ಸಂಘಗಳು, ವ್ಯವಸಾಯೇತರ ಉದ್ದೇಶಗಳಿಗಾಗಿ ಸಾಲ ನೀಡುವ ಸಂಘಗಳು. ಪ್ರಾಥಮಿಕ ಬಳಕೆದಾರರ ಸಹಕಾರಿ ಬ್ಯಾಂಕ್ ಮತ್ತು ಅದರ ಶಾಖೆಗಳು ಗೃಹನಿರ್ಮಾಣ ಸಹಕಾರ ಸಂಘ, ತುಂಗಭದ್ರಾ ವ್ಯಾವಸಾಯಿಕ ಉಪಕರಣಗಳ ಸಹಕಾರಿ ಸಂಘ, ವಾಣಿಜ್ಯ ಬ್ಯಾಂಕ್‍ಗಳು ಮೊದಲಾದವು ಜಿಲ್ಲೆಯ ಹಣಕಾಸು ವ್ಯವಹಾರದ ಬೇಡಿಕೆ ಪೂರೈಸುತ್ತಿವೆ.

	ಬಳ್ಳಾರಿ ಜಿಲ್ಲೆ ದಕ್ಷಿಣ ಭಾರತದ ಮಧ್ಯವರ್ತಿ ಪ್ರದೇಶದಲ್ಲಿದ್ದು, ಜಿಲ್ಲಾ ಕೇಂದ್ರ ಬಳ್ಳಾರಿಯಿಂದ ಬೆಂಗಳೂರು, ಹುಬ್ಬಳ್ಳಿ-ಧಾರಾವಾಡ, ಪಣಜಿ, ಮಂಗಳೂರು, ಸೊಲ್ಲಾಪುರ, ಪುಣೆ, ಮುಂಬಯಿ, ಹೈದರಾಬಾದು, ವಿಜಯವಾಡ, ಮದರಾಸು, ಮಚಲಿಪಟ್ಟಣ ಮೊದಲಾದ ಸ್ಥಳಗಳಿಗೆ ಹೆದ್ದಾರಿ ಸಂಪರ್ಕವಿದೆ. ಇಂದು ಜಿಲ್ಲೆಯ ಎಲ್ಲ ತಾಲ್ಲೂಕು ಮತ್ತು ಹೋಬಳಿ ಹಾಗೂ ಮುಖ್ಯ ಊರುಗಳಿಗೆ ಒಳ್ಳೆಯ ರಸ್ತೆ ಸಂಪರ್ಕವಿದೆ. ಈ ಜಿಲ್ಲೆಯಲ್ಲಿ 209 ಕಿಮೀ ರೈಲು ಮಾರ್ಗವಿದೆ. ಗುಂತಕಲ್ಲು-ಬಳ್ಳಾರಿ-ಹೊಸಪೇಟೆ-ಹುಬ್ಬಳ್ಳಿ ಮಾರ್ಗ, ಬಳ್ಳಾರಿ-ರಾಯದುರ್ಗ ಮಾರ್ಗ, ಹೊಸಪೇಟೆ ಕೊಟ್ಟೂರು ಮಾರ್ಗ ಹಾಗೂ ಗುಂದ ರೋಡ್ ಕೂಡುವ ಸ್ಥಳದಿಂದ ಸಾಮೇಹಳ್ಳಿಗೆ ಹೋಗುವ ಮಾರ್ಗ ಇವು ಈ ಜಿಲ್ಲೆಯಲ್ಲಿರುವ ರೈಲುಮಾರ್ಗಗಳು. ಇವುಗಳ ಜೊತೆಗೆ 1966ರಲ್ಲಿ ಗುಂತಕಲ್-ಹೊಸಪೇಟೆ ಬ್ರಾಡ್‍ಗೇಜ್ ಮಾರ್ಗ ನಿರ್ಮಾಣವಾಯಿತು.

	ಜಿಲ್ಲೆಯಲ್ಲಿ ಆಸ್ಪತ್ರೆಗಳು, ಔಷಧಾಲಯಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆರೋಗ್ಯ ಉಪಕೇಂದ್ರಗಳು, ವಿ.ಡಿ. ವೈದ್ಯಾಲಯಗಳು, ಕ್ಷಯರೋಗ ಚಿಕಿತ್ಸಾ ಕೇಂದ್ರ, ರಕ್ತ ಬ್ಯಾಂಕ್, ಆರೋಗ್ಯ ಪ್ರಯೋಗಾಲಯ ಇವೆ.

	ಜಿಲ್ಲೆಯಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳೂ ಜೂನಿಯರ್ ಕಾಲೇಜುಗಳೂ ಸೇರಿ ಪ್ರೌಢಶಾಲೆಗಳೂ ಇವೆ.  ಕಲೆ ಮತ್ತು ವಿಜ್ಞಾನ ಪದವಿ ಕಾಲೇಜುಗಳು, ಒಂದು ವೈದ್ಯಕೀಯ ಮತ್ತು  ಆಯುರ್ವೇದ ಕಾಲೇಜುಗಳಿವೆ. ಇವಲ್ಲದೆ ಕೈಗಾರಿಕಾ ತರಬೇತಿ ಸಂಸ್ಥೆ, ಜೂನಿಯರ್ ತಾಂತ್ರಿಕ ಶಾಲೆ, ಉಪಾಧ್ಯಾಯರ ತರಬೇತಿ ಸಂಸ್ಥೆಗಳು, ವಾಣಿಜ್ಯ ಶಿಕ್ಷಣ ಸಂಸ್ಥೆಗಳು ಸಹ ಇವೆ. ಒಂದು ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಶಾಖಾಗ್ರಂಥಾಲಯಗಳು ಇವೆ. ಈ ಜಿಲ್ಲೆಯ ವೀರಶೈವ ಮಠಗಳು ಶೈಕ್ಷಣಿಕ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಮಹತ್ತ್ವದ ಪಾತ್ರವಹಿಸಿವೆ.

	ಜಾತ್ರೆ, ಉತ್ಸವಗಳು ಈ ಜಿಲ್ಲೆಯಲ್ಲಿ ನಡೆಯುತ್ತವೆ. ಹಂಪೆಯ ರಥೋತ್ಸವ, ಹಡಗಲಿ ತಾಲ್ಲೂಕಿನ ಮೈಲಾರದ ಕರ್ಣಿಕ, ಬಳ್ಳಾರಿಯ ಮಲ್ಲೇಶ್ವರ ರಥೋತ್ಸವ ಮೊದಲಾದವು ಬೃಹತ್ ಧಾರ್ಮಿಕ ಉತ್ಸವಗಳು.

	ಈ ಜಿಲ್ಲೆಗೆ ಭವ್ಯ ಪೌರಾಣಿಕ ಪರಂಪರೆ ಇದೆ. ವಾಲಿ, ಸುಗ್ರೀವ ಮತ್ತು ಆಂಜನೇಯ ಇಲ್ಲಿಯ ಋಷ್ಯಮೂಕ ಪರ್ವತದ ಬಳಿ ಕಿಷ್ಕಿಂದೆಯಲ್ಲಿದ್ದರೆಂದು ಪ್ರತೀತಿ. ಬ್ರಹ್ಮನ ಮಗಳು ಪಂಪಾಳ ಹೆಸರಿನಲ್ಲಿ ಪ್ರಸಿದ್ಧವಾದ ಪಂಪಾಕ್ಷೇತ್ರವೇ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆ, ಈ ಜಿಲ್ಲೆಯ ಇನ್ನು ಅನೇಕ ಸ್ಥಳಗಳು ಪೌರಾಣಿಕ ಹಿನ್ನೆಲೆ ಪಡೆದಿದೆ.
ಈ ಜಿಲ್ಲೆಯಲ್ಲಿ ನಡೆದಿರುವ ಪ್ರಾಗೈತಿಹಾಸಿಕ ಸಂಶೋಧನೆಗಳಿಂದ ಇಲ್ಲಿ ಹಳೆಯ ಶಿಲಾ ಯುಗದಿಂದ ಕಬ್ಬಿಣದ ಯುಗದವರೆಗಿನ ಸಂಸ್ಕøತಿಗಳು ಪ್ರಚಲಿತವಾಗಿತ್ತೆಂದು ಸಿದ್ಧವಾಗಿದೆ. ನಿಟ್ಟೂರು, ಕುಪ್ಪಗಲ್ಲು, ಸಂಗನಕಲ್ಲು, ಹಂಪಸಾಗರ, ತೆಕ್ಕಲಕೋಟೆ ಈ ಜಿಲ್ಲೆಯ ಮುಖ್ಯ ಪ್ರಾಗೈತಿಹಾಸಿಕ ನೆಲೆಗಳು.

	ಜಿಲ್ಲೆಯ ಇತಿಹಾಸ ಮೌರ್ಯರ ಕಾಲದಿಂದ ಪ್ರಾರಂಭವಾಗುತ್ತದೆ. ತೆಕ್ಕಲ ಕೋಟೆಯ ಬಳಿ ನಿಟ್ಟೂರಿನಲ್ಲಿ ಇತ್ತೀಚಿಗೆ ಅಶೋಕನ ಎರಡು ಶಾಸನಗಳು ಬೆಳಕಿಗೆ ಬಂದಿವೆ (1977). ಶಾತವಾಹನರು ಮೂಲತಃ ಬಳ್ಳಾರಿ ಜಿಲ್ಲೆಗೆ ಸೇರಿದವರೆಂದು ಕೆಲವು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಅವರ ಆಳ್ವಿಕೆ ಕಾಲದಲ್ಲಿ ಈ ಭಾಗಕ್ಕೆ ಸಾತವಾಹನಿಹಾರ ಎಂಬ ಹೆಸರಿತ್ತು. ಬನವಾಸಿಯ ಕದಂಬರು ಈ ಜಿಲ್ಲೆಯನ್ನು ಆಳಿದರು. ಜಿಲ್ಲೆಯ ಉಚ್ಚಂಗಿ ದುರ್ಗದವರೆಗಿನ ಪ್ರದೇಶ ಬನವಾಸಿ 12000 ಪ್ರಾಂತ್ಯಕ್ಕೆ ಸೇರಿತ್ತೆಂದು ಹೇಳಲಾಗಿದೆ. ಉಚ್ಚಂಗಿದುರ್ಗ ಕದಂಬರ ಒಂದು ಶಾಖೆಯ ರಾಜಧಾನಿಯಾಗಿತ್ತು. ಮುಂದೆ ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು ಅವರ ಸಾಮಂತರಾಗಿದ್ದ ನೊಳಂಬರು ಮತ್ತು ಗಂಗರ ಅಧೀನದಲ್ಲಿ ಈ ಜಿಲ್ಲೆಯ ಕೆಲವು ಭಾಗಗಳು ಇದ್ದವು. 11-12ನೆಯ ಶತಮಾನಗಳಲ್ಲಿ ಕಲ್ಯಾಣದ ಚಾಳುಕ್ಯರ ಸಾಮಂತರಾಗಿದ್ದ ಉಚ್ಚಂಗಿಯ ಪಾಂಡ್ಯರು ಈ ಪ್ರದೇಶದಲ್ಲಿ ಆಳುತ್ತಿದ್ದರು. ಚಾಳುಕ್ಯರ ಕಾಲದಲ್ಲಿ ಕೆಲವು ಕಾಲ ಈ ಜಿಲ್ಲೆಯ ಕಂಪ್ಲಿ ಪ್ರಾಂತೀಯ ರಾಜಧಾನಿಯಾಗಿತ್ತು. ಮುಂದೆ ಈ ಕಾಲದ ಕೊನೆಯಲ್ಲಿ ಪ್ರಸಿದ್ಧವಾಗಿ ಮೆರೆದ ಕುಮ್ಮಟ ಅಥವಾ ಕಂಪಿಲಿ ಸಂಸ್ಥಾನದ ರಾಜಧಾನಿ ಇದ್ದುದ್ದು ಈ ಜಿಲ್ಲೆಯಲ್ಲಿಯೇ. ಮಹಮದ್-ಬಿನ್-ತುಗಲಕ್‍ನ ಕಾಲದಲ್ಲಿ ಅಂತಿಮವಾಗಿ ಇದು ಪತನವಾಯಿತು. ಮುಂದೆ ಸುಮಾರು ಮುನ್ನೂರು ವರ್ಷಗಳ ಕಾಲ ಇಡೀ ದಕ್ಷಿಣ ಭಾರತವನ್ನು ಒಳಗೊಂಡು ಆಳಿದ ವಿಜಯನಗರ ಸಾಮ್ರಾಜ್ಯದ ರಾಜಧಾನಿ ನೆಲೆಗೊಂಡಿದ್ದುದು ಈ ಜಿಲ್ಲೆಯ ಹಂಪೆಯಲ್ಲಿ; 1565ರ ರಕ್ಕಸತಂಗಡಿ ಕದನದಲ್ಲಿ ವಿಜಯನಗರದ ಅರಸರು ಸೋತಮೇಲೆ ವಿಜಯನಗರ ಹಾಳುಹಂಪೆಯಾಯಿತು. ಅನಂತರ ಈ ಜಿಲ್ಲೆ ಆದಿಲ್‍ಶಾಹೀ ಸುಲ್ತಾನರ ಮತ್ತು ಹಲವು ಪಾಳೆಯಗಾರರ ಆಳ್ವಿಕೆಗೆ ಒಳಪಟ್ಟಿತು. ತರುವಾಯ ಮರಾಠರು ಮತ್ತು ಮುಗಲರು ಇಲ್ಲಿ ಅಧಿಪತ್ಯ ನಡೆಸಿದರು. ಮೈಸೂರಿನ ಹೈದರ್‍ಆಲಿ ಮತ್ತು ಟಿಪ್ಪುಸುಲ್ತಾನ್ ಈ ಜಿಲ್ಲೆಯನ್ನು ಸಂಪೂರ್ಣವಾಗಿ ತಮ್ಮ ಆಧೀನಗೊಳಿಸಿ ಕೊಂಡಿದ್ದರು, 1792ರ ಒಪ್ಪಂದದ ಪ್ರಕಾರ ಈ ಜಿಲ್ಲೆಯ ಕೆಲವು ಭಾಗಗಳನ್ನು ಟಿಪ್ಪು ನಿಜಾಮನಿಗೆ ಬಿಟ್ಟುಕೊಟ್ಟ. ಶ್ರೀರಂಗಪಟ್ಟಣದ ಪತನಾನಂತರ 1800ರ ಹೊತ್ತಿಗೆ ಈ ಜಿಲ್ಲೆ ಬ್ರಿಟಿಷರಿಗೆ ಸೇರಿ ಮದರಾಸು ಪ್ರಾಂತ್ಯದ ಭಾಗವಾಯಿತು. 1954ರಲ್ಲಿ ಆಂಧ್ರಪ್ರದೇಶದ ಸ್ಥಾಪನೆಯಾದಾಗ ಅಂದಿನ ಬಳ್ಳಾರಿ ಜಿಲ್ಲೆಯ ಅದವಾನಿ, ಆಲೂರು ಮತ್ತು ರಾಯದುರ್ಗ ತಾಲ್ಲೂಕುಗಳ ವಿನಾ ಮಿಕ್ಕ ಭಾಗ ಮೈಸೂರು ಸಂಸ್ಥಾನಕ್ಕೆ ಸೇರಿತು. ಆ ಭಾಗವೇ ಇಂದು ಕರ್ನಾಟಕ ರಾಜ್ಯದಲ್ಲಿರುವ ಬಳ್ಳಾರಿ ಜಿಲ್ಲೆ.

	ಬಳ್ಳಾರಿ ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ಕೇಂದ್ರಗಳಿವೆ. ಹಂಪೆ (ನೋಡಿ- ಹಂಪೆ) ಪ್ರಪಂಚ ಪ್ರಸಿದ್ಧವಾದದ್ದು. ಉಚ್ಚಂಗಿದುರ್ಗ, ಕಂಪ್ಲಿಗಳಲ್ಲಿ ಪ್ರಾಚೀನಕಾಲದ ಕೋಟೆಗಳಿದ್ದರೆ ಬಳ್ಳಾರಿ, ಗುಡಿಕೋಟೆ, ಕೆಂಚನಗುಡ್ಡ, ಜರಮಲೆ ಮೊದಲಾದೆಡೆಗಳಲ್ಲಿ ಟಿಪ್ಪುಸುಲ್ತಾನ್ ಮತ್ತು ಕೆಲವು ಸ್ಥಳೀಯ ಪಾಳೆಯಗಾರರು ಕಟ್ಟಿದ ಕೋಟೆಗಳು ಸುಸ್ಥಿತಿಯಲ್ಲಿ ಉಳಿದಿವೆ. ಸಂಡೂರಿನ ಬೆಟ್ಟದ ಮೇಲಿರುವ ಪಾರ್ವತಿ ದೇವಾಲಯ ರಾಷ್ಟ್ರಕೂಟದ ಕಾಲದ್ದೆನ್ನಲಾಗಿದೆ. ಅಂಬಲಿ, ಕುರುವತ್ತಿ, ನೀಲಗುಂದ, ಬಾಗಳಿ, ಮಾಗಳ ಹಿರೇಹಡಗಲಿ, ಹೂವಿನ ಹಡಗಲಿ, ಸೋಗಿ ಮೊದಲಾದ ಸ್ಥಳಗಳಲ್ಲಿ ಕಲ್ಯಾಣದ ಚಾಳುಕ್ಯರ ಕಾಲದ ಸುಂದರ ದೇವಾಲಯಗಳು ಇವೆ.

	ವೀರಶೈವರ ಪಂಚಪೀಠಗಳಲ್ಲೊಂದು ಉಜ್ಜನಿ ಕೂಡ್ಲಗಿ ತಾಲ್ಲೂಕಿನಲ್ಲಿದೆ. ಇಲ್ಲಿಯ ಮರುಳು ಸಿದ್ಧೇಶ್ವರ ದೇವಾಲಯ ಸುಂದರ ಕೆತ್ತನೆಯಿಂದ ಕೂಡಿದೆ. ಹಂಪೆಯನ್ನು ಹೊರಗೆ ನೋಡು ಉಜ್ಜಿನಿಯನ್ನು ಒಳಗೆ ನೋಡು ಎಂಬುದು ಬಳ್ಳಾರಿ ಜಿಲ್ಲೆಯ ಮನೆಮಾತಾಗಿದೆ. ಕುರುಗೋಡು, ಕೊಟ್ಟೂರು ಮತ್ತಿತರ ಕಡೆಗಳಲ್ಲಿ ಬಸವೇಶ್ವರ ದೇವಸ್ಥಾನಗಳಿವೆ. ಕುರುಗೋಡಿನಲ್ಲೇ ನೀಲಮ್ಮನವರ ಮಠವಿದೆ. ಹಡಗಲಿ ತಾಲ್ಲೂಕಿನ ಮೈಲಾರದಲ್ಲಿ ಪ್ರಸಿದ್ಧ ಮೈಲಾರ ದೇವಾಲಯವಿದೆ. ಕೊಟ್ಟೂರಿನ ಮೂರುಕಲ್ಲು ಮಠ, ಬಳ್ಳಾರಿ ತಾಲ್ಲೂಕಿನ ಚೆಳ್ಳಗುರ್ಕಿಯಲ್ಲಿರುವ ಎರ್ರಿತಾತ ಶಿವಯೋಗಿಗಳ ಜೀವ ಸಮಾಧಿ, ಕೂಡ್ಲಿಗಿ ತಾಲ್ಲೂಕಿನ ಕಾನಮಡುವಿನಲ್ಲಿರುವ ಶರಣಾರ್ಯರೆಂಬ ವೀರಶೈವ ಸಂತರ ಸಮಾಧಿ, ಎಮ್ಮಿಗನೂರಿನಲ್ಲಿರುವ ಜಡೆ ತಾತನ ಸಮಾಧಿ ಇವೂ ಧಾರ್ಮಿಕ ಕೇಂದ್ರಗಳು.

	ಕೂಡ್ಲಿಗಿ ತಾಲ್ಲೂಕಿನ ಅಮರದೇವರ ಗುಡ್ಡದಲ್ಲಿ 1.71 ಎಕರೆ ಪ್ರದೇಶವನ್ನು ಆವರಿಸಿರುವ ಬೃಹತ್ ಆಲದ ಮರವಿದೆ. ತುಂಗಭದ್ರಾ ಅಣೆಕಟ್ಟು ಪ್ರೇಕ್ಷಣೀಯ ಸ್ಥಳವಾಗಿದೆ. ಕೂಡ್ಲಿಗಿ ತಾಲ್ಲೂಕಿನಲ್ಲಿ ಗುಡಿಕೋಟೆಗೆ ಮೂರು ಕಿಮೀ ದೂರದಲ್ಲಿ ಸರ್ವೋದಯ ಗ್ರಾಮ ಸ್ಥಾಪಿತವಾಗಿದೆ.

	ತಾಲ್ಲೂಕು: ಜಿಲ್ಲೆಯ ಪೂರ್ವದಂಚಿನಲ್ಲಿ ಇರುವ ಈ ತಾಲ್ಲೂಕು ಉತ್ತರಕ್ಕೆ ಸಿರುಗುಪ್ಪ, ಪಶ್ಚಿಮಕ್ಕೆ ಹೊಸಪೇಟೆ ಮತ್ತು ಸಂಡೂರು ತಾಲ್ಲೂಕುಗಳು, ನೈಋತ್ಯ, ದಕ್ಷಿಣ, ಆಗ್ನೇಯ, ಪೂರ್ವ ಮತ್ತು ಈಶಾನ್ಯ ದಿಕ್ಕುಗಳಲ್ಲಿ ಆಂಧ್ರಪ್ರದೇಶ ಭಾಗ-
ಇವುಗಳ ನಡುವೆ ಇದೆ. ತಾಲ್ಲೂಕಿನಲ್ಲಿ ಮೋಕ, ಬಳ್ಳಾರಿ, ರೂಪನಗುಡಿ, ಕೋಳೂರು, ಕುರುಗೋಡು ಈ ಹೋಬಳಿಗೂ ಒಟ್ಟು 104 ಗ್ರಾಮಗಳೂ ಇದೆ. ವಿಸ್ತೀರ್ಣ 1.681 ಚ.ಕಿಮೀ. ಈ ತಾಲ್ಲೂಕಿನಲ್ಲಿ 3,18,342 ಮಂದಿ ಪುರುಷರು 3,07,087 ಮಂದಿ ಮಹಿಳೆಯರೂ ಇದ್ದು ಒಟ್ಟು ಜನಸಂಖ್ಯೆ 6,25,439 (2001).

	ಈ ತಾಲ್ಲೂಕಿನ ಬಹುಭಾಗದಲ್ಲಿ ಬೆಟ್ಟಗುಡ್ಡಗಳೂ ಅವುಗಳ ನಡುವೆ ವಿಶಾಲ ಕಪ್ಪುಮಣ್ಣಿನ ಬಯಲುಗಳೂ ಇವೆ. ಕೆಲವು ಭಾಗದಲ್ಲಿ ಕಲ್ಲಿನ ಬರಡಾದ ಪ್ರದೇಶವುಂಟು. ತಾಮ್ರಪರ್ವತಶ್ರೇಣಿ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಹಬ್ಬಿದೆ. ಬಳ್ಳಾರಿ ಪಟ್ಟಣಕ್ಕೆ 22 ಕಿಮೀ ದೂರದಲ್ಲಿ ಕುರುಗೋಡು ಬೆಟ್ಟ ಸಮೂಹವಿದೆ. ಇಲ್ಲಿಯ ಅತ್ಯಂತ ಎತ್ತರ ಪ್ರದೇಶ 599 ಮೀ ಇದೆ. ಬಳ್ಳಾರಿ ಕೋಟೆ ಇರುವ ಗುಡ್ಡ ಸಮುದ್ರ ಮಟ್ಟಕ್ಕೆ 602 ಮೀ ಎತ್ತರವಿದೆ. ತುಂಗಭದ್ರಾ ನದಿ ಬಳ್ಳಾರಿ ತಾಲ್ಲೂಕಿನ ವಾಯವ್ಯ ಸರಹದ್ದಿಗೆ ಸ್ವಲ್ಪ ದೂರದಲ್ಲಿ ಹಾದುಹೋಗುತ್ತದೆ. ತಾಲ್ಲೂಕಿನ ಪೂರ್ವದಲ್ಲಿ ಹಗರಿ ನದಿ ಉತ್ತರಾಭಿಮುಖವಾಗಿ ಸ್ವಲ್ಪ ದೂರ ರಾಜ್ಯದ ಗಡಿಯಾಗಿ ಹರಿಯುತ್ತದೆ. ಈ ತಾಲ್ಲೂಕಿಗೆ ಸಂಬಂಧಿಸಿದಂತೆ ಈ ನದಿಯ ಹರಿವಿನ ಉದ್ದ 45 ಕಿಮೀ. ತಾಲ್ಲೂಕಿನ ಮಧ್ಯದಲ್ಲಿ ಹುಟ್ಟಿ ಈಶಾನ್ಯಾಭಿಮುಖವಾಗಿ ಹರಿದು ಸಿರಗುಪ್ಪ ತಾಲ್ಲೂಕಿನ ಬೂದಗುಪ್ಪ ಗ್ರಾಮದ ಪೂರ್ವಕ್ಕೆ ಹಗರಿಯನ್ನು ಸೇರುವ ಪೆದ್ದವಂಕ ನದಿ ಹಗರಿಯ ಮುಖ್ಯ ಉಪನದಿ. ತಾಲ್ಲೂಕಿನ ವಾಯುವ್ಯದ ಕೊನೆಯಲ್ಲಿ ಉತ್ತರಾಭಿಮುಖವಾಗಿ ರಾಮಪುರ ವಂಕ ಹರಿದು ಹೊಸಪೇಟೆ ತಾಲ್ಲೂಕಿನ ಈಶಾನ್ಯದ ಕೊನೆಯಲ್ಲಿ ತುಂಗಭದ್ರಾ ನದಿಯನ್ನು ಸೇರುವುದು. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 518ಮಿಮೀ. ಸಸ್ಯವರ್ಗ ತೆಳುವಾಗಿದ್ದು ಕುರುಚಲು ಕಾಡುಗಳು ಮಾತ್ರ ಇವೆ. 1968-69ರ ಅಂಕಿ ಅಂಶಗಳ ಪ್ರಕಾರ ತಾಲ್ಲೂಕಿನ ಒಟ್ಟು 168,958 ಹೆಕ್ಟೇರ್‍ಗಳಲ್ಲಿ 2,277 ಹೆಕ್ಟೇರ್ ಅರಣ್ಯ ಪ್ರದೇಶವಿದ್ದು 15,1982 ಹೆಕ್ಟೇರ್‍ಗಳಲ್ಲಿ ಬೆಳೆ ತೆಗೆಯಲಾಗಿತ್ತು. 154 ಹೆಕ್ಟೇರ್ ಹುಲ್ಲುಗಾವಲು ಪ್ರದೇಶವಿತ್ತು. ತುಂಗಭದ್ರಾ ಜಲಾಶಯ ಈ ತಾಲ್ಲೂಕಿನ ಹಲವಾರು ಎಕರೆ ಜಮೀನಿಗೆ ನೀರೊದಗಿಸಿದೆ. ಈ ತಾಲ್ಲೂಕಿನ ಮುಖ್ಯ ಆರ್ಥಿಕ ಬೆಳೆ ಹತ್ತಿ (55,252 ಹೆಕ್ಟೇರುಗಳು). ಬತ್ತ, ಕಬ್ಬು, ಜೋಳ, ಸಜ್ಜೆ, ನವಣೆ, ಹೆಸರುಕಾಳು, ನೆಲಗಡಲೆ ಇತರ ಮುಖ್ಯ ಬೆಳೆಗಳು.

ಈ ತಾಲ್ಲೂಕಿನಲ್ಲಿ ವ್ಯವಸಾಯ ಸಂಶೋಧನ ಕೇಂದ್ರವಿದೆ. ಬಳ್ಳಾರಿಯಲ್ಲಿ ಮಣ್ಣು ಪರೀಕ್ಷಣಾ ಉಪಕೇಂದ್ರವಿದೆ. ಮೋಕದಲ್ಲಿ ಬೀಜದ ತಳಿ ವೃದ್ಧಿಸುವ ತೋಟವಿದೆ. ಬಳ್ಳಾರಿ ಮತ್ತು ಕೂಡಿತಿನಿಗಳಲ್ಲಿ ಪಶುವೈದ್ಯ ಶಾಲೆಗಳಿವೆ. ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕುಗಳು, ಸಹಕಾರ ಸಂಘಶಾಖೆಗಳು, ವಾಣಿಜ್ಯ ಬ್ಯಾಂಕುಗಳು ಇಲ್ಲಿಯ ವ್ಯವಸಾಯಾಭಿವೃದ್ಧಿಗೆ ನೆರವಾಗುತ್ತವೆ.
ಬಳ್ಳಾರಿ ತಾಲ್ಲೂಕಿಗೆ ತುಂಗಭದ್ರಾ ಅಣೆಕಟ್ಟು ಸ್ಥಾವರದಿಂದ ಮತ್ತು ಹಂಪೆ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಪೂರೈಕೆಯಾಗುತ್ತದೆ. ಈ ತಾಲ್ಲೂಕಿನಲ್ಲಿ 38 ಹಳ್ಳಿಗಳಿಗೆ ವಿದ್ಯುತ್ ಪೂರೈಕೆಯಾಗಿದೆ (1970). ಬೆಳಗಲ್ಲು, ಹರಗನದೋಣ ಮೊದಲಾದ ಕಡೆಗಳಲ್ಲಿ ಕಬ್ಬಿಣದ ಅದುರನ್ನು ತೆಗೆಯಲಾಗುತ್ತದೆ. ಬಳ್ಳಾರಿ ತಾಲ್ಲೂಕಿನ ಕೇಂದ್ರವಾದ ಬಳ್ಳಾರಿ ಪಟ್ಟಣ ಜಿಲ್ಲಾ ಕೇಂದ್ರವೂ ಆಗಿರುವುದರಿಂದ ಇಲ್ಲಿ ಅನೇಕ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಿದೆ. ಹತ್ತಿ ಎಕ್ಕುವ ಘಟಕಗಳನ್ನು ಈ ತಾಲ್ಲೂಕಿನ ವಿವಿಧ ಕಡೆಗಳಲ್ಲೂ ಸ್ಥಾಪಿಸಲಾಗಿದೆ, ಕುರುಗೋಡು, ಕುಪ್ಪಗಲ್ಲು, ಕುಡುತಿನಿ, ಎಮ್ಮಿಗನೂರು ಮೊದಲಾದ ಕಡೆಗಳಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳಿವೆ. ಬಳ್ಳಾರಿಯ ಸಮೀಪದಲ್ಲಿ ಬೆಸಲಹಳ್ಳಿಯಲ್ಲಿರುವ ಕಬ್ಬಿಣೋತ್ಪನ್ನಗಳ ಕೈಗಾರಿಕೆ ಮುಖ್ಯವಾದುದು. ಮೋಕದಲ್ಲಿ ಕೈಮಗ್ಗಗಳಿವೆ. ಇವುಗಳ ಜೊತೆಗೆ ಎಣ್ಣೆಗಾಣಗಳು, ಮಣ್ಣಿನ ಪಾತ್ರೆಗಳನ್ನು ತಯಾರಿಸುವುದು, ಮರಗೆಲಸ, ಕಬ್ಬಿಣದ ಕೆಲಸ ಮುಂತಾದ ಗೃಹ ಉದ್ಯಮಗಳಿವೆ.

ಈ ತಾಲ್ಲೂಕಿನಲ್ಲಿರುವ ರಸ್ತೆಗಳ ಉದ್ದ 370.2 ಕಿಮೀ. ಗುಂತಕಲ್ಲು ಹುಬ್ಬಳ್ಳಿ ರೈಲುಮಾರ್ಗ ಈ ತಾಲ್ಲೂಕಿನ ಮೂಲಕ ಹಾದುಹೋಗುತ್ತದೆ. ಕುರುಗೊಡು ದೊಡ್ಡ ಬಸವೇಶ್ವರ ಜಾತ್ರೆ, ಬಳ್ಳಾರಿಯ ಮಲ್ಲೇಶ್ವರಸ್ವಾಮಿ ಜಾತ್ರೆ, ಮುಂತಾದ ಜಾತ್ರೆಗಳೂ ವಾರದ ಸಂತೆಗಳು ನಡೆಯುತ್ತವೆ.

ಈ ತಾಲ್ಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಾಲೆಗಳಿದ್ದು ಪ್ರೌಢಶಾಲೆಗಳಿವೆ. ಜೊತೆಗೆ ಪದವಿ ಕಾಲೇಜುಗಳು, ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಇತರ ವೃತ್ತಿ ಪ್ರಧಾನ ಕಾಲೇಜುಗಳಿದ್ದು ಈ ತಾಲ್ಲೂಕಿನ ಶಿಕ್ಷಣ ಸೌಲಭ್ಯ ಉತ್ತಮವಾಗಿದೆ.

ಈ ತಾಲ್ಲೂಕಿನ ಗ್ರಾಮಗಳಲ್ಲಿ, ಬಳ್ಳಾರಿ ನಗರಕ್ಕೆ ಈಶಾನ್ಯದಲ್ಲಿ 12 ಕಿಮೀ ದೂರದಲ್ಲಿರುವ ಭೈರದೇವರಹಳ್ಳಿಯಲ್ಲಿ ಬಳ್ಳಾರಿ ನಗರದ ನೀರು ಸರಬರಾಜು ಕೇಂದ್ರವಿದೆ. ಬಳ್ಳಾರಿ-ಅನಂತಪುರ ಮಾರ್ಗದಲ್ಲಿ ಬಳ್ಳಾರಿಯಿಂದ 26 ಕಿಮೀ ದೂರದಲ್ಲಿರುವ ಚೆಳ್ಳಗುರ್ಕಿ ಗ್ರಾಮದಲ್ಲಿ ಸಂತ ಎರ್ರಿತಾತನ ಸಮಾಧಿ ಮತ್ತು ಒಂದು ಪ್ರೌಢಶಾಲೆ ಇದೆ. ಬಳ್ಳಾರಿ ನಗರಕ್ಕೆ 17 ಕಿಮೀ ದೂರದಲ್ಲಿರುವ ದಮ್ಮೂರಿನಲ್ಲಿ ವೆಂಕಟಪ್ಪನವರ ಸಮಾಧಿ ಮತ್ತು ಗುಹಾದೇವಾಲಯವಿದೆ. ಬಳ್ಳಾರಿಯ ಸಮೀಪದಲ್ಲಿರುವ ಸಂಗನಕಲ್ಲು, ಈಶಾನ್ಯಕ್ಕೆ 12 ಕಿಮೀ ದೂರದಲ್ಲಿರುವ ಕುಪ್ಪಗಲ್ಲು ಮತ್ತು ವಾಯುವ್ಯಕ್ಕೆ 20 ಕಿಮೀ ದೂರದಲ್ಲಿರುವ ಕುಡತಿನಿಯಲ್ಲಿ ಪ್ರಾಗೈತಿಹಾಸಿಕ ನೆಲೆಗಳು ಇವೆ. ಬೆಲೆಬಾಳುವ ಕಂಬಳಿ ತಯಾರಿಕೆಗೆ ಕುಂಡತಿನಿ ಪ್ರಸಿದ್ಧ. ಕುರುಗೋಡು ಇತಿಹಾಸ ಪ್ರಸಿದ್ಧ ಗ್ರಾಮ. ಬಳ್ಳಾರಿಯ ಈಶಾನ್ಯಕ್ಕೆ ಸುಮಾರು 18 ಕಿಮೀ ದೂರದಲ್ಲಿರುವ ಮೋಕ ಹೋಬಳಿ ಕೇಂದ್ರ, ಹಗರಿ ನದಿ ಎಡದಂಡೆಯ ಮೇಲಿರುವ ಈ ಗ್ರಾಮದಲ್ಲಿ ವಿಸ್ತಾರವಾದ ಭೂಪ್ರದೇಶವನ್ನು ವ್ಯವಸಾಯಕ್ಕೆ ಒಳಪಡಿಸಿರುವ ಕೃಷಿ ಕ್ಷೇತ್ರವಿದೆ. ಇಲ್ಲಿ ಮಲ್ಲೇಶ್ವರಸ್ವಾಮಿ ದೇವಾಲಯವಿದ್ದು ವರ್ಷಕ್ಕೊಮ್ಮೆ ರಥೋತ್ಸವವಾಗುತ್ತದೆ. ಬಳ್ಳಾರಿಯ ಉತ್ತರಕ್ಕೆ ಸುಮಾರು 8 ಕಿಮೀ ದೂರದಲ್ಲಿರುವ ಸೀದರಗಡ್ಡ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಒಂದು ಮಣ್ಣು ಸಂರಕ್ಷಣಾ ಮತ್ತು ಸಂಶೋಧನಾ ಕೇಂದ್ರ ಉಂಟು. ಬಳ್ಳಾರಿ ತಾಲ್ಲೂಕಿನ ವಾಯುವ್ಯದಲ್ಲಿ ಬಳ್ಳಾರಿಯಿಂದ ಸುಮಾರು 46 ಕಿಮೀ ದೂರದಲ್ಲಿ ರಾಮಪುರ ವಂಕದ ಬಲಕ್ಕೆ ತುಂಗಭದ್ರಾ ನದಿಯ ಬಲದಂಡೆಯ ಕಡೆ ಇರುವ ಎಮ್ಮಿಗನೂರು ಗ್ರಾಮ ತುಂಗಭದ್ರಾ ಯೋಜನೆಯ ಕೆಳನಾಲೆಯಿಂದ ನೀರಾವರಿ ಸೌಕರ್ಯಗಳಿಸಿ ಶೀಘ್ರವಾಗಿ ಅಭಿವೃದ್ಧಿಯಾಗುತ್ತಿದೆ. ಇಲ್ಲಿ ಜಡೆತಾತನ ಪವಿತ್ರ ಸಮಾಧಿ ಇದೆ.

ಪಟ್ಟಣ: ಜಿಲ್ಲೆ ಮತ್ತು ತಾಲ್ಲೂಕಿನ ಆಡಳಿತ ಕೇಂದ್ರವಾಗಿರುವ ಬಳ್ಳಾರಿ ಬೆಂಗಳೂರು-ರಾಯಚೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಉತ್ತರಕ್ಕೆ 314 ಕಿಮೀ ದೂರದಲ್ಲಿದೆ. ಗುಂತಕಲ್ಲು-ಹುಬ್ಬಳ್ಳಿ ರೈಲುಮಾರ್ಗ ಈ ಪಟ್ಟಣದ ಮೂಲಕ ಹಾದುಹೋಗುತ್ತದೆ. ಪಟ್ಟಣದ ಜನಸಂಖ್ಯೆ 3,17,000 (2001).

ಜಿಲ್ಲಾ ಕೇಂದ್ರವಾಗಿ ಅನೇಕ ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳನ್ನು ಹೊಂದಿರುವ ಬಳ್ಳಾರಿ ಪಟ್ಟಣ ಕೈಗಾರಿಕೆ ಮತ್ತು ವಾಣಿಜ್ಯದಲ್ಲೂ ಮುಖ್ಯ ಸ್ಥಾನ ಪಡೆದಿದೆ. ಈ ಜಿಲ್ಲೆಯ ತುಂಗಭದ್ರಾ ಜಲಾಶಯ ಯೋಜನೆ, ಗಣಿ ಉದ್ಯಮಗಳು, ಉಕ್ಕಿನ ಕಾರ್ಖಾನೆಗಳು ಬಳ್ಳಾರಿಯ ಬೆಳೆವಣಿಗೆಗೆ ಪೂರಕವಾಗಿವೆ. ಆಟೋಮೊಬೈಲ್, ನೂಲುವ ಮತ್ತು ನೇಯ್ಗೆ ಕಾರ್ಖಾನೆಗಳು. ಎಣ್ಣೆ ತಯಾರಿಕಾ ಘಟಕಗಳು, ಬಳೆ, ಉಡುಪು ತಯಾರಿಕೆ ಉದ್ಯಮ, ಹೊಗೆಸೊಪ್ಪು ಸಿದ್ಧಪಡಿಸುವ ಕೇಂದ್ರಗಳು, ಎಂಜಿನಿಯರಿಂಗ್ ಕಾರ್ಯಾಗಾರಗಳು, ಮರದ ಕೈಗಾರಿಕೆಗಳು, ಮುದ್ರಣ, ಚರ್ಮ ಮತ್ತು ರಬ್ಬರ್ ವಸ್ತುಗಳ ತಯಾರಿಕಾ ಕೇಂದ್ರಗಳು, ರಾಸಾಯನಿಕ ವಸ್ತುಗಳ ತಯಾರಿಕಾ ಘಟಕಗಳು, ಪ್ಲಾಸ್ಟಿಕ್ ಮತ್ತು ಕೈಮಗ್ಗ ತಾಂತ್ರಿಕ ಕಾಲೇಜು, ಆಯುರ್ವೇದ ಕಾಲೇಜು ಕಲೆ, ವಿಜ್ಞಾನ ಮತ್ತು ವಾಣಿಜ್ಯ ವೈದ್ಯಶಾಲೆ, ಸಹಕಾರ ಸಂಘಗಳು ಇಲ್ಲಿ ಸ್ಥಾಪಿತವಾಗಿವೆ. ವಿದ್ಯುಚ್ಛಕ್ತಿ, ಅಂಚೆತಂತಿ, ದೂರವಾಣಿ ಸೌಲಭ್ಯಗಳಿವೆ. ರಕ್ಷಿತ ಕುಡಿಯುವ ನೀರು ಸರಬರಾಜಿದೆ.

ಬಳ್ಳಾರಿ ಪಟ್ಟಣ ನಗರಸಭಾಡಳಿತಕ್ಕೆ ಒಳಪಟ್ಟಿದೆ. ಪಟ್ಟಣದ ಹಳೆಯ ಭಾಗದ ಜೊತೆಗೆ ಇಂದು ಅನೇಕ ಹೊಸ ಬಡಾವಣೆಗಳು ರೂಪುಗೊಂಡಿವೆ. ಈ ಊರಿನ ದುರ್ಗಮ್ಮನ ಗುಡಿ ಬಹು ಹಳೆಯ ಕಾಲದ್ದು. ಪ್ರತಿವರ್ಷ ಫೆಬ್ರುವರಿ ತಿಂಗಳಲ್ಲಿ ಇಲ್ಲಿ ಉತ್ಸವ ನಡೆಯುತ್ತದೆ. ಶಿವಾನುಭವ ಮಂಟಪ, ಬಳ್ಳೇಶ್ವರ ದೇವಸ್ಥಾನ, ರಾಘವಾಂಕ ಸ್ವಾಮಿಗಳ ಮಠ, ಉರವಕೊಂಡ ಮಠ, ಮರಿಸ್ವಾಮಿಗಳ ಮಠ, ಕೊಟ್ಟೂರು ಸ್ವಾಮಿಗಳ ಮಠ, ಮದ್ದಾನಸ್ವಾಮಿಗಳ ಮಠ, ಬ್ರೊಸಪೇಟೆ ಮತ್ತು ಕೌಲ್ ಬಜಾರ್‍ನಲ್ಲಿರುವ ಎರಡು ಮಸೀದಿಗಳು ಕೆಳಕೋಟೆಯ ಟ್ರಿನಿಟಿ ಚರ್ಚ್-ಇವು ಈ ಊರಿನ ಮುಖ್ಯ ಧಾರ್ಮಿಕ ಸ್ಥಾನಗಳು.

ಶಿವ ಅಥವಾ ಮಲ್ಲೇಶ ತನ್ನ ಭಕ್ತನಿಗೆ ಇಲ್ಲಿ ಬಳ್ಳದಲ್ಲಿ ಕಾಣಿಸಿಕೊಂಡಿದ್ದರಿಂದ ಬಳ್ಳಾರಿ ಎಂಬ ಹೆಸರು ಬಂದಿತು. ಬಳ್ಳಾರಿಯಲ್ಲಿರುವ ದುರ್ಗಮ್ಮ ದೇವತೆಯನ್ನು ಬಳ್ಳಾರಿ ಎಂದು ಕರೆಯುತ್ತಿದ್ದರಾದ್ದರಿಂದ ಊರಿಗೆ ಬಳ್ಳಾರಿ ಎಂದು ಹೆಸರಾಯಿತು. ಬಳ ಎಂಬ ರಾಕ್ಷಸನನ್ನು ಇಂದ್ರನು ಕೊಂದ ಸ್ಥಳ ಬಳ್ಳಾರಿ ಎಂದಾಯಿತು ಎಂದು ಸ್ಥಳ ಐತಿಹ್ಯಗಳಿವೆ. ಹನ್ನೆರಡನೆಯ ಶತಮಾನದ ಹೊಯ್ಸಳರ ಶಾಸನಗಳಿಂದ ಮತ್ತು ಇತರ ಶಾಸನಗಳಿಂದ ಈ ಸ್ಥಳಕ್ಕೆ ಬಳ್ಳಾರಿ ಎಂಬ ಹೆಸರಿದ್ದುದು ತಿಳಿದುಬರುತ್ತದೆ.

ಬಳ್ಳಾರಿಯಲ್ಲಿರುವ ಎರಡು ಬೃಹತ್ ಶಿಲಾಗುಡ್ಡಗಳು ಇಲ್ಲಿಯ ಭೌಗೋಳಿಕ ಪರಿಸರಕ್ಕೆ ಒಂದು ವಿಶಿಷ್ಟತೆಯನ್ನು ತಂದುಕೊಟ್ಟಿವೆ. ಇವುಗಳಲ್ಲಿ ಒಂದರ ಮೇಲೆ ಕೋಟೆ ಇದೆ. ಇದು ಸುಮಾರು ಎರಡೂವರೆ ಕಿಮೀ ಸುತ್ತಳತೆಯಿದ್ದು ಸಮುದ್ರ ಮಟ್ಟದಿಂದ 602 ಮೀ.ಗಳಷ್ಟು ಮತ್ತು ಪಟ್ಟಣದ ನೆಲಮಟ್ಟದಿಂದ 146 ಮೀಗಳಷ್ಟು ಎತ್ತರವಿದೆ. ಇಲ್ಲಿಯ ಕೋಟೆಬೆಟ್ಟಗಳೆರಡರಲ್ಲೂ ಇತಿಹಾಸ ಪೂರ್ವಕಾಲದ ಜನರು ಬಳಸಿದ ಉಪಕರಣಗಳ ಪಳೆಯುಳಿಕೆಗಳು ದೊರೆತಿವೆ. ಕೋಟೆಬೆಟ್ಟದಲ್ಲಿ ಮೇಲಿನ ಕೋಟೆ ಮತ್ತು ಕೆಳಗಿನ ಕೋಟೆಗಳಿದ್ದು ಮೇಲಿನ ಕೋಟೆಯಲ್ಲಿ ಬಂಡೆಯಮೇಲೆ ದುರ್ಗವಿದೆ. ಇದರ ಸುತ್ತ ಒಂದರ ಕೆಳಗೆ ಒಂದರಂತೆ ಎರಡು ಕಾಪುಗೋಡೆಗಳಿವೆ. ಕೋಟೆ ದುರ್ಬಲವಾಗಿರುವೆಡೆಗಳಲ್ಲಿ ಮೂರು ಸುತ್ತು ಗೋಡೆಗಳಿದ್ದರೆ ಬಲವಾಗಿರುವ ಕಡೆಗಳಲ್ಲಿ ಒಂದು ಸುತ್ತು ಗೋಡೆ ಇದೆ. ಕೋಟೆಗೆ ಒಂದೇ ಕಡೆ ಮಾರ್ಗವುಂಟು. ತುದಿಯಲ್ಲಿ ದುರ್ಗದ ಹೊರಗಡೆ ಕೆಲವು ಚಿಕ್ಕ ದೇವಾಲಯಗಳೂ ನೀರಿನ ಕೊಳಗಳೂ ಇವೆ. ಆ ಕೊಳಗಳಲ್ಲಿ ಒಂದು 9 ಮೀ ಆಳವಿದೆ. ದುರ್ಗದ ಒಳಗಡೆ ದೃಢವಾದ ಕೆಲವು ಕಟ್ಟಡಗಳಿವೆ. ಕೆಳಕೋಟೆ ಸುಮಾರು ಐದೂವರೆ ಮೀ.ಗಳಷ್ಟು ಎತ್ತರವಿರುವ ಅಳುವೇರಿಯಂತೆ ಸುತ್ತುವರಿದಿದೆ. ವೃತ್ತಾಕಾರದ ಕಲ್ಲಿನ ಬುರುಜುಗಳು ಮತ್ತು 5.5 ಮೀ.ಗಳಷ್ಟು ಆಳ ಹಾಗೂ 9 ರಿಂದ 12 ಮೀ.ಗಳಷ್ಟು ಅಗಲವಿರುವ ಕಂದಕವಿದೆ.

ಹದಿನಾರನೆಯ ಶತಮಾನದಲ್ಲಿ ಹನುಮಪ್ಪ ನಾಯಕ ಇಲ್ಲಿ ತನ್ನ ಪಾಳೆಯಪಟ್ಟನ್ನು ಸ್ಥಾಪಿಸಿದ್ದ. 1631ರ ತನಕವೂ ಇದ್ದ ಈ ಪಾಳೆಯಪಟ್ಟಿಗೆ ಬಳ್ಳಾರಿ ಕೇಂದ್ರ ಸ್ಥಳವಾಗಿತ್ತು. ಈ ಕಾಲದಲ್ಲಿಯೇ ಇಲ್ಲಿಯ ಕೋಟೆ ವ್ಯವಸ್ಥಿತವಾದಂತೆ ತೋರುತ್ತದೆ. ತರುವಾಯ ಈ ಸ್ಥಳ ಮುಸ್ಲಿಮರ ಅಧೀನಕ್ಕೊಳಪಟ್ಟಿತ್ತು. ಸುಮಾರು 1678ರಲ್ಲಿ ಶಿವಾಜಿ ಇಲ್ಲಿಯ ಕೋಟೆಯನ್ನು ಆಕ್ರಮಿಸಿದ. ಇಲ್ಲಿ ಆಗ ಆಳುತ್ತಿದ್ದ ವಿಧವೆ ರಾಣಿಯೊಬ್ಬಳು ಶಿವಾಜಿಗೆ ಕಪ್ಪ ಸಲ್ಲಿಸಲು ಒಪ್ಪಿಕೊಂಡು ರಾಜ್ಯವನ್ನು ಉಳಿಸಿಕೊಂಡಳು. ಮುಂದೆ ಈ ಪ್ರದೇಶ ಔರಂಗಜೇಬನ ಅಧೀನಕ್ಕೊಳಗಾಯಿತು. 1629ರಲ್ಲಿ ಪಾಳೆಯಗಾರರು ಮತ್ತೆ ಕೋಟೆಯನ್ನು ಸ್ವಾಧೀನಕ್ಕೆ ತೆಗೆದುಕೊಂಡರು. 1764ರಲ್ಲಿ ದಖನ್ನಿನ ಸುಬೇದಾರನಾಗಿದ್ದ ಸಲಾಬತ್‍ಜಂಗನ ಸಹೋದರ ಬಸಾಲತ್‍ಜಂಗನಿಗೆ ಜಹಗೀರಿಯಾಗಿ ಬಿಟ್ಟಿದ್ದ ಆದವಾನಿ ಸಂಸ್ಥಾನಕ್ಕೆ ಇದು ಅಧೀನ ಸಂಸ್ಥಾನವಾಯಿತು. ಆಗ ಇಲ್ಲಿ ರಾಮಪ್ಪ ಎಂಬಾತ ಆಳುತ್ತಿದ್ದ. ಈ ಕೋಟೆಯನ್ನು ಹೈದರ್ ಆಲಿ 1775ರಲ್ಲಿ ವಶಪಡಿಸಿಕೊಂಡ. ಹೈದರ್ ಇಲ್ಲಿರುವ ಮೇಲಿನ ಮತ್ತು ಕೆಳ ಕೋಟೆಗಳನ್ನು ಈಗಿರುವಂತೆ ಕಟ್ಟಿಸಿದ.

 1792ರವರೆಗೆ ಇದು ಟಿಪ್ಪುಸುಲ್ತಾನನ ವಶದಲ್ಲಿತ್ತು. ತರುವಾಯ ನಿಜಾಮನಿಗೂ ಅನಂತರ 1800ರಲ್ಲಿ ಈಸ್ಟ್ ಇಂಡಿಯಾ ಕಂಪನಿಗೂ ವರ್ಗಾವಣೆಯಾಯಿತು. ಕರ್ನೂಲಿನ ನವಾಬ ಮುಜಾಫರ್ ಖಾನನನ್ನು ಇಲ್ಲಿ 1823ರಿಂದ 1864ರವರೆಗೂ ಬಂಧಿಸಿಡಲಾಗಿತ್ತು. ಬ್ರಿಟಿಷರ ಕಾಲದಲ್ಲಿ ಇಲ್ಲಿಯ ಕೆಳಕೋಟೆಯಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಲಾಯಿತು. ಇಂದು ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಚರ್ಚ್‍ಗಳಿವೆ. ಅವುಗಳಲ್ಲಿ ಟ್ರೆನಿಟಿ ಚರ್ಚ್ 1811ರಲ್ಲಿ ರಚಿಸಿದ್ದು. 1801ರಲ್ಲಿ ಬಳ್ಳಾರಿಯಲ್ಲಿ ಸೈನಿಕ ನೆಲೆಯನ್ನು ಸ್ಥಾಪಿಸಲಾಯಿತು. ಬ್ರೂಸ್ ಪೇಟೆ ಕೌಲ್ ಬಜಾರ್ ಮತ್ತು ಮೇಲಾರ್ ಪೇಟೆ ಪ್ರದೇಶಗಳು ಬ್ರಿಟಿಷರ ಕಾಲದಲ್ಲಿ ಅಭಿವೃದ್ಧಿಗೊಂಡವು. 1901ರಷ್ಟು ಹಿಂದೆಯೇ ಬಳ್ಳಾರಿಯ ಜನಸಂಖ್ಯೆ 58,247ರಷ್ಟಿತ್ತು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ*